ಹಿಮಾಚಲ ಪ್ರದೇಶ: ಶಿಮ್ಲಾದ ಕಸೌಲಿಯಲ್ಲಿರುವ ಸರ್ಕಾರಿ ಹೋಟೆಲ್‌ನಲ್ಲಿ ಹರ್ಯಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ ಮತ್ತು ಗಾಯಕ ಜೈ ಭಗವಾನ್ ಅಲಿಯಾಸ್ ರಾಕಿ ಉದ್ಯೋಗ ಕೊಡಿಸುವ ಅಮಿಷವೊಡ್ಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದೆಹಲಿ ಮೂಲದ ಮಾಡೆಲಿಂಗ್ ಕ್ಷೇತ್ರದ ಯುವತಿ ದೂರು ಕೊಟ್ಟಿದ್ದಾರೆ. ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಯುವತಿಯ ದೂರಿನಲ್ಲಿ, ಬಡೋಲಿ ಮತ್ತು ರಾಕಿ ಅತ್ಯಾಚಾರ ಎಸಗಿರುವುದಲ್ಲದೆ, ಕೃತ್ಯವನ್ನು ವೀಡಿಯೋ ಚಿತ್ರೀಕರಿಸಿ, ಆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಸಹ ಆರೋಪ ಮಾಡಿದ್ದಾರೆ.
ದೂರು ಮತ್ತು ಎಫ್‌ಐಆರ್ ವಿವರ
ಡಿ.13 ರಂದು ಹಿಮಾಚಲದ ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಮಂಗಳವಾರದಂದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಯುವತಿಯ ದೂರಿನ ಪ್ರಕಾರ ಜುಲೈ 3, 2023 ರಂದು ಕಸೌಲಿಯ ಹೋಟೆಲ್‌ನಲ್ಲಿ ಸ್ನೇಹಿತನೊಂದಿಗೆ ತಂಗಿದ್ದಾಗ, ಬಡೋಲಿ ತನ್ನನ್ನು ರಾಜಕಾರಣಿ ಎಂದು, ರಾಕಿ ತನ್ನನ್ನು ಗಾಯಕನೆಂದು ಪರಿಚಯಿಸಿಕೊಂಡಿದ್ದರು. ನಂತರ ಒಟ್ಟು ಆರು ವ್ಯಕ್ತಿಗಳು ಸರ್ಕಾರಿ ಕೆಲಸ ಮತ್ತು ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ, ಅವರನ್ನು ತಮ್ಮ ಕೊಠಡಿಗೆ ಕರೆದೊಯ್ದಿದ್ದಾರೆ.
ಕೊಠಡಿಯಲ್ಲಿ, ಯುವತಿಗೆ ಮದ್ಯಪಾನ ಮಾಡಲು ಒತ್ತಾಯಿಸಲಾಗಿದ್ದು, ನಿರಾಕರಿಸಿದ ನಂತರ ಅತ್ಯಾಚಾರ ಎಸಗಿದ್ದಾರೆ. ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿ, ಈ ವಿಷಯ ಬಹಿರಂಗ ಮಾಡಿದರೆ ಪ್ರಾಣಹಾನಿ ಮಾಡುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಘಟನೆ ನಡೆದ ಎರಡು ತಿಂಗಳ ನಂತರ, ಪಂಚಕುಲದಲ್ಲಿರುವ ರಾಕಿಯ ಮನೆಯಲ್ಲಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸುವುದಾಗಿ ಆರೋಪಿಗಳು ಮತ್ತೊಮ್ಮೆ ಬೆದರಿಸಿದ್ದಾರೆ.