ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ನ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ದೊಡ್ಡ ಕುಸಿತವಾಗಿದೆ. ಪ್ರತಿ ಡಾಲರ್ ಮೌಲ್ಯ ₹86.27 ಕ್ಕೆ ಏರಿಕೆಗೊಂಡಿದ್ದು, ಇದು ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಟ ಮೌಲ್ಯವಾಗಿದೆ.
ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರಹರಿವು ಮುಂದುವರಿಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಏರಿಕೆಯಾಗುತ್ತಿದೆ. ಅದರ ಜೊತೆಗೆ ಅಮೆರಿಕದ ಬಾಂಡ್ ಗಳಿಕೆಯಲ್ಲಿಯೂ ಏರಿಕೆಯಾಗುತ್ತಿದ್ದು, ಇವು ದೇಶೀಯ ವಿದೇಶಿ ವಿನಿಮಯ ದರಕ್ಕೆ ಒತ್ತಡ ಹೇರುತ್ತಿವೆ. ಅಲ್ಲದೇ, ದೇಶೀಯ ಸೂಚ್ಯಂಕಗಳಲ್ಲಿ ಇಳಿಕೆ ಉಂಟಾಗಿರುವ ಕಾರಣ ರೂಪಾಯಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಇದರಿಂದಾಗಿ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.