ಮಂಗಳೂರು: ಮಾರಕವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬೆಳ್ತಂಗಡಿ ತಾಲೂಕಿನ ಕಕ್ಕೆಜಾಲ್ ನಿವಾಸಿ ಮುಹದ್ ಎಂಬ ಪುಟ್ಟ ಮಗುವಿನ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಸರ್ವಧರ್ಮಿಯ ದಾನಿಗಳ ನೆರವಿನಿಂದ ಸುಮಾರು 95 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಬೆಳ್ತಂಗಡಿ ತಾಲೂಕಿನ ಕಕ್ಕೆಜಾಲ್ ಉಜಿರೆ ಭಾಗದ ಮುಸ್ತಫಾ ಹಾಗೂ ನಫೀಸಾ ಬಾನು ದಂಪತಿಗಳ ಮುಹದ್ ಎಂಬ ಪುಟ್ಟ ಮಗು Neuroblastoma ಎಂಬ ಮಾರಕವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ 90 ಲಕ್ಷದ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮೂಲಕ ಮನವಿ ಮಾಡಿದಾಗ ಪಯಾಝ್ ಮಾಡೂರು ಹಾಗೂ ತಂಡ ಚಿಕಿತ್ಸೆಗೆ ಬೇಕಾದ ಮೊತ್ತವನ್ನು ದಾನಿಗಳ ಸಹಾಯದಿಂದ ಸಂಗ್ರಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಲ ಧಾರ್ಮದ ಜನ, ರಾಜಕೀಯ ವ್ಯಕ್ತಿಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಅನಿವಾಸಿ ದಾನಿಗಳ ನೆರವಿನಿಂದ ಕೆಲವೇ ದಿನಗಳಲ್ಲಿ ಈ ದೊಡ್ಡ ಗುರಿಯನ್ನು ಸಾಧಿಸಲು ಸಾಧ್ಯವಾಗಿದೆ. ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.