ಮಡಗಾಂವ್: “ಗೋವಾದ ಅರ್ಚಕರು ಲೂಟಿಕೋರರು” ಎಂದು ಹೇಳಿಕೆ ನೀಡಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೊಂಕಣಿ ಸಾಹಿತಿ ದತ್ತ ದಾಮೋದರ್ ನಾಯಕ್ ವಿರುದ್ಧ ಕಾಣಕೋಣ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಪ್ರಕರಣ ಧಾರ್ಮಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ತೀವ್ರ ವಿವಾದವನ್ನು ಹುಟ್ಟುಹಾಕಿದೆ.
ಕಾಣಕೋಣ ನಿವಾಸಿ ಸತೀಶ್ ಭಟ್ ಎಂಬುವವರು ಧಾರ್ಮಿಕ ಭಾವನಗಳಿಗೆ ಧಕ್ಕೆ ತಂದಿದ್ದಾರೆ ಎಂದು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹೇಳಿಕೆ ದೇವಾಲಯಗಳು, ಅರ್ಚಕರು ಮತ್ತು ಮಠಗಳಿಗೆ ಸಂಬಂಧಿಸಿದ ನಾಯಕ್ ಅವರ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ್ ಅವರು “ಲೂಟಿ ಎಂಬ ಶಬ್ದಕ್ಕೆ ಬದಲಾಗಿ ಬೇರೆ ಪದ ಬ್ಲಾಸಬಹುದಿತ್ತು. ಹಣ ಸುಲಿಗೆ ಮಾಡುತ್ತಾರೆ ಎಂಬ ಅರ್ಥದಲ್ಲಿ ಮಾತ್ರ ನಾನು ಹೇಳಿದ್ದೆ” ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಸ್ಥಳೀಯ ವಾಹಿನಿಯೊಂದಕ್ಕೆ ಅವರು ನೀಡಿದ್ದ ಸಂದರ್ಶನದಲ್ಲಿ, “ದೇವರು ಮತ್ತು ಧರ್ಮಕ್ಕೆ ನಾನು ಒಂದು ಪೈಸೆಯೂ ಕೊಡುವುದಿಲ್ಲ. ದೇಗುಲಗಳು ಹಣವನ್ನು ಲೂಟಿ ಮಾಡುತ್ತಿವೆ. ಈ ಅರ್ಚಕರು, ಪರ್ತಗಾಳಿ ಮಠ ಹಾಗೂ ದೇವಾಲಯಗಳು ನನ್ನನ್ನು ಲೂಟಿ ಮಾಡುವ ಸಾಧ್ಯತೆ ಇತ್ತು” ಎಂದು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.