ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗಿಡದ ಮುದ್ದೇನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಟಾಟಾ ಏಸ್ ವಾಹನದಲ್ಲಿ ‘ಜೈ ಭೀಮ್’ ಹಾಡು ಹಾಕಿದ್ದಕ್ಕೆ ರೈಲ್ವೆ ಪೊಲೀಸ್ ಚಂದ್ರಶೇಖರ್ ಎಂಬುವವರು ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಹಲ್ಲೆಯ ಸಂದರ್ಭದಲ್ಲಿ ಯುವಕನೋರ್ವನ ಮರ್ಮಾಂಗಕ್ಕೆ ಕಾಲಿನಿಂದ ಒದ್ದಿದ್ದಾರೆ ಎಂದು ದೂರಲಾಗಿದೆ. ತುಮಕೂರು ತಾಲ್ಲೂಕಿನ ಸಿರಿವರ ಗ್ರಾಮದ ದೀಪು (19) ಹಾಗೂ ಚಾಲಕ ನರಸಿಂಹ ಮೂರ್ತಿ ಹಲ್ಲೆಗೊಳಗಾದ ಯುವಕರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಯುವಕರು, ಟಾಟಾ ಏಸ್ ನಲ್ಲಿ ಅಂಬೇಡ್ಕರ್ ಅವರ ಜೈಭೀಮ್ ಹಾಡು ಹಾಕಿಕೊಂಡು ಹೋಗುತ್ತಿದ್ದೆವು. ಈ ವೇಳೆ ರೈಲ್ವೆ ಪೊಲೀಸ್ ಚಂದ್ರಶೇಖರ್ ಹಾಗೂ ನರಸಿಂಹರಾಜು ಇಬ್ಬರು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಗಲಾಟೆ ಮಾಡಿದರು. ಅಂಬೇಡ್ಕರ್ ಹಾಡು ಯಾಕೇ ಹಾಕಿದ್ದೀರಾ? ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿದರು. ಜಾತಿ ಕೇಳಿ, ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.