ಹೊಸ ದೆಹಲಿ: ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರನ್ನು ಪದಚ್ಯುತಗೊಳಿಸಲು ಅಲ್ಲಿನ ವಿಪಕ್ಷಗಳು ಸಹಕಾರದ ಜೊತೆಗೆ ಭಾರತದಿಂದ 6 ಮಿಲಿಯನ್ ಡಾಲರ್ ಅಥವಾ ಸುಮಾರು 51.37 ಕೋಟಿ ರೂ. ಹಣವನ್ನು ಕೇಳಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅಲ್ಲಿನ ವಿಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕರು ಈ ಪ್ರಯತ್ನ ಮಾಡಿದ್ದರು ಎಂದು ಪತ್ರಿಕೆ ವರದಿ ಮಾಡಿದೆ. “ಡೆಮಾಕ್ರಟಿಕ್ ರಿನ್ಯೂವಲ್ ಇನಿಶಿಯೇಟಿವ್” ಹೆಸರಿನಲ್ಲಿ ಲಭ್ಯವಾಗಿರುವ ಗೌಪ್ಯ ದಾಖಲೆಗಳ ಮೂಲಕ ವಾಷಿಂಗ್ಟನ್ ಪೋಸ್ಟ್ ಗೆ ಮಾಹಿತಿ ಲಭ್ಯವಾಗಿದೆ ಎಂದು ಪತ್ರಿಕೆ ಹೇಳಿಕೊಂಡಿದೆ.
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ವಿರುದ್ಧ ದೋಷಾರೋಪಣೆ ಮಾಡಲು ಮತ್ತು ಮತಕ್ಕೆ ಹಾಕಲು ಮುಯುಝ್ಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಸಂಸದರೂ ಸೇರಿ, 40 ಸಂಸದರಿಗೆ ಲಂಚ ನೀಡುವ ಯೋಜನೆ ಹಾಕಿಕೊಂಡಿದ್ದರು. ಅದರ ಜೊತೆಗೆ ಮಾಲ್ದೀವ್ಸ್ ಸೇನೆಯ 10 ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ಮೂರು “ಪ್ರಬಲ ಕ್ರಿಮಿನಲ್ ಗ್ಯಾಂಗ್” ಗಳಿಗೆ ಹಣ ಪಾವತಿಸುವ ಯೋಜನೆ ಹೊಂದಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.