ಬೀದರ್: ಜಿಲ್ಲೆಯ ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ನಡೆದಿದೆ. ಭೀಮಾ ಕೊರೆಗಾಂವ್ ವಿಜಯೋತ್ಸವದ ಬ್ಯಾನರ್ ನಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ರಾತ್ರಿಯ ಸಮಯದಲ್ಲಿ ಕಿಡಿಗೇಡಿಗಳು ಸೆಗಣಿ ಬಳಿದು ಅವಮಾನ ಮಾಡಿರುವುದು ಕಂಡುಬಂದಿದೆ.
ಮುಂಜಾನೆ ಇದನ್ನು ಗಮನಿಸಿದ ದಲಿತ ಸಮುದಾಯದವರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸುವ ಇನ್ನೊಂದು ಘಟನೆ ಕಳೆದ ಡಿಸೆಂಬರ್ 12ರಂದು ಇದೇ ವಿಳಾಸಪುರ ಗ್ರಾಮದಲ್ಲೇ ನಡೆದಿತ್ತು. ಅಂದು ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿತ್ತು. ಈ ಘಟನೆಯ ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ದಲಿತ ಸಂಘಟನೆಗಳು ಘಟನೆ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.