ಬಳ್ಳಾರಿ: ಕರ್ನಾಟಕದ ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಹಾಗೂ ಆಂಧ್ರಪ್ರದೇಶದ ಮೆಟಹಾಳ್ ಗ್ರಾಮದ ಜನರ ನಡುವೆ ಎಮ್ಮೆಯ ಮಾಲಿಕತ್ವದ ವಿಚಾರವಾಗ್ ಘರ್ಷಣೆಯಾಗಿದೆ. ಆ ಜಗಳ ಈಗ ಮೋಕಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎಮ್ಮೆಯ ಡಿಎನ್ಎ ಪರೀಕ್ಷೆ ನಡೆಸುವ ಮೂಲಕ ಅದು ಯಾರಿಗೆ ಸೇರಬೇಕು ಎಂದು ನಿರ್ಧಾರವಾಗಲಿ ಎಂದು ಎರಡೂ ಗ್ರಾಮದ ಜನ ಪಟ್ಟು ಹಿಡಿದಿದ್ದಾರೆ.
ಗ್ರಾಮದ ಜಾತ್ರೆಯಲ್ಲಿ ಬಲಿ ಕೊಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಗ್ರಾಮಸ್ಥರು ಈ ಎಮ್ಮೆಯನ್ನು ಗ್ರಾಮದಲ್ಲಿ ತಂದು ಬಿಟ್ಟಿದ್ದರು. ಆದರೆ ಆ ಐದು ವರ್ಷದ ಎಮ್ಮೆ ಗ್ರಾಮದಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿತ್ತು. ಈಗ ಅದು ಆಂಧ್ರದ ಮೆಟಹಾಳ್ ಗ್ರಾಮದಲ್ಲಿ ಪತ್ತೆಯಾಗಿದೆ. ಬೊಮ್ಮನಹಾಳ್ ಗ್ರಾಮಸ್ಥರು ಅಲ್ಲಿಗೆ ಹೋಗಿ ಎಮ್ಮೆಯನ್ನು ವಾಪಸ್ ತರುವ ಪ್ರಯತ್ನದಲ್ಲಿರುವಾಗ ಅದನ್ನು ವಾಪಸ್ ನೀಡಲು ಮೆಟಹಾಳ್ ಗ್ರಾಮದ ಜನರು ಸಿದ್ದರಿರಲಿಲ್ಲ. ಅದು ಈಗ ವ್ಯಾಜ್ಯವಾಗಿ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.