ಬೆಂಗಳೂರು: ಕೇಂದ್ರ ಸರ್ಕಾರದ 2025-26 ನೇ ಸಾಲಿನ ಬಜೆಟ್ ಮೋದಿ ಸರ್ಕಾರ ಕಳೆದ 10 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವಂತೆ ಜನ ದ್ರೋಹಿ ಬಜೆಟ್ ಆಗಿದೆ. ಬಜೆಟ್ ನಲ್ಲಿ ಎಂದಿನಂತೆ ಕರ್ನಾಟಕ್ಕೆ ಚೊಂಬು ಕೊಡಲಾಗಿದೆ. ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಒಂದಷ್ಟು ರಿಯಾಯಿತಿ ನೀಡುವ ಮೂಲಕ ಅವರ ಮೂಗಿಗೆ ತುಪ್ಪ ಸವರಲಾಗಿದೆ. ರೈತರು, ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ಬರೆ ಎಳೆಯಲಾಗಿದೆ ಮತ್ತು ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ಬಹಿರಂಗ ದ್ರೋಹ ಬಗೆದಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ತಮ್ಮ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಜೆಟ್ ನಲ್ಲಿ ಕರ್ನಾಟಕದ ಯಾವುದೇ ನೀರಾವರಿ, ರೈಲ್ವೆ, ಕೈಗಾರಿಕೆಗಳಿಗೆ ಯಾವುದೇ ವಿಶೇಷ ಅನುದಾನ ಒದಗಿಸಲಾಗಿಲ್ಲ. ತಮ್ಮ ರಾಜಕೀಯ ಲಾಭಕ್ಕೆ ಕುಮಾರಸ್ವಾಮಿಯವರು ಪ್ರತಿನಿಧಿಸುವ ಮಂಡ್ಯ ಕ್ಷೇತ್ರಕ್ಕೆ ಒಂದಷ್ಟು ಹಣ ನೀಡಿರುವುದು ಬಿಟ್ಟರೆ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಯಾವುದೇ ಹೊಸ ಯೋಜನೆ, ಹಣ ದೊರಕಿಲ್ಲ. ಅರ್ಥಾತ್ ಕರ್ನಾಟಕ ರಾಜ್ಯಕ್ಕೆ ಎಂದಿನಂತೆ ಮೋದಿ ಸರ್ಕಾರ ಚೊಂಬು ನೀಡಿದೆ. ಆದರೆ ಇದರ ವಿರುದ್ಧ ಕರ್ನಾಟಕದ ಯಾವುದೇ ಸಂಸದರು ತುಟಿ ಬಿಚ್ಚುವುದಿಲ್ಲ. ಬಿಜೆಪಿ ಸಂಸದರು ಬಿಡಿ ಅವರು ಮೋದಿ, ಶಾ ಹೇಳಿದರೆ ಕರ್ನಾಟಕವನ್ನು ದಾನವಾಗಿ ನೀಡಲೂ ಸಿದ್ದವಾಗುತ್ತಾರೆ. ಅವರು ಮೋದಿ, ಶಾ ಎದುರು ನಿಂತುಕೊಳ್ಳುವ ಧೈರ್ಯವೂ ಇಲ್ಲ. ಅಡ್ಡಬಿದ್ದು ಬರುವುದೊಂದೇ ಗೊತ್ತು. ಕಾಂಗ್ರೆಸ್ ಸಂಸದರೂ ಹೆಚ್ಚೇನೂ ಪ್ರತಿರೋಧ ಒಡ್ಡುವುದಿಲ್ಲ. ಮಾಧ್ಯಮಗಳ ಮುಂದೆ ಒಂದಷ್ಟು ಅರಚಾಡಿ ಬೆಚ್ಚಗೆ ಮಲಗಿ ಬಿಡುತ್ತಾರೆ. ಒಟ್ಟಿನಲ್ಲಿ ಕರ್ನಾಟಕಕ್ಕೆ ಏನೇ ಅನ್ಯಾಯ ಆದರೂ ಹೇಳುವವರು, ಕೇಳುವವರು ಯಾರೂ ಇಲ್ಲ. ಅದೇ ಧೈರ್ಯದಲ್ಲಿ ಮೋದಿ ಸರ್ಕಾರ ಕರ್ನಾಟಕಕ್ಕೆ ಬೇರೆ ಯಾವುದೇ ರಾಜ್ಯಕ್ಕೆ ಮಾಡದ ಮಟ್ಟದಲ್ಲಿ ದ್ರೋಹ ಬಗೆಯುತ್ತದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ದೇಶದ ಬೆನ್ನೆಲುಬಾದ ರೈತರು, ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಈ ಬಜೆಟ್ ನಲ್ಲಿ ಬರೆ ಎಳೆಯಲಾಗಿದೆ. ಅವರ ಪ್ರತಿಭಟನೆಗಳಿಗೆ ಪ್ರತಿಯಾಗಿ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯವನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಒದಗಿಸುವ, ಆ ಮೂಲಕ ಒಂದಷ್ಟು ಆದಾಯ ತಂದುಕೊಡುವು ನರೇಗಾ ಯೋಜನೆಗೆ ಕಳೆದ ಬಜೆಟ್ ಗಿಂತ 3,154 ಕೋಟಿ ರೂಪಾಯಿ ಕಡಿಮೆ ಹಣ ನೀಡಲಾಗಿದೆ. ಕಳೆದ ಬಾರಿ 89,154 ಕೋಟಿ ಪಡೆದಿದ್ದ ಈ ಯೋಜನೆ, ಈ ಬಾರಿ ಕೇವಲ 8,600 ಕೋಟಿ ರೂಪಾಯಿ ಮಾತ್ರ ಪಡೆದಿದೆ. ಇನ್ನು ಅತಿಹೆಚ್ಚು ಅನುದಾನ ಪಡೆಯಬೇಕಿದ್ದ ನೀರಾವರಿ ಕ್ಷೇತ್ರಕ್ಕೆ ಕೇವಲ 8260 ಕೋಟಿ ರೂಪಾಯಿ, ಅಂದರೆ ಕಳೆದ ಬಾರಿಗಿಂದ ಕೇವಲ 10 ಕೋಟಿ ರೂಪಾಯಿ ಮಾತ್ರ ಹೆಚ್ಚಿಗೆ ನೀಡಲಾಗಿದೆ. ಇನ್ನು ರೈತರನ್ನು ಆತ್ಮಹತ್ಯೆಯಿಂದ ಕಾಪಾಡಬಹುದಾದ ಬೆಳೆ ವಿಮೆ ಕ್ಷೇತ್ರಕ್ಕೆ ಕೇವಲ 12,242 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಕಳೆದ ಬಾರಿಗಿಂತ ಸುಮಾರು 3,600 ಕೋಟಿ ಕಡಿಮೆಯಾಗಿದೆ. ಇದು ಕೃಷಿ ಕ್ಷೇತ್ರ ವಿರುದ್ಧ ಮೋದಿ ಸರ್ಕಾರಕ್ಕೆ ಇರುವ ಅಸಹನೆಯನ್ನು ತೋರಿಸುತ್ತದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಬಹಿರಂಗವಾಗಿಯೇ ದ್ರೋಹ ಬಗೆಯಲಾಗಿದೆ. ಎಸ್.ಟಿ ಸಮುದಾಯಕ್ಕೆ ನೀಡುವ ನ್ಯಾಷನಲ್ ಫೆಲೋಷಿಪನ್ನು 165 ಕೋಟಿಯಿಂದ ಕೇವಲ ಎರಡು ಲಕ್ಷಕ್ಕೆ ಇಳಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿವೇತನವನ್ನು ಸುಮಾರು 1000 ಕೋಟಿ ಇಂದ ಕೇವಲ 197.50 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ ಇದು ದೊಡ್ಡ ದ್ರೋಹ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಕಿಡಿ ಕಾರಿದ್ದಾರೆ.
ಆದಾಯ ತೆರಿಗೆ ಮಿತಿ ಏರಿಕೆ ಒಂದನ್ನು ಬಿಟ್ಟು, ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಅಂಶವೂ ಈ ಬಜೆಟ್ ನಲ್ಲಿ ಇಲ್ಲ. ಇನ್ನು ಆದಾಯ ತೆರಿಗೆ ವಿಚಾರಕ್ಕೆ ಬರುವುದಾದರೆ. ಜನರ ಆದಾಯವೇ ಮಾಯವಾಗಿರುವಾಗ ತೆರಿಗೆ ಮಿತಿ ಏರಿಕೆ ಯಾವ ಪುರುಷಾರ್ಥಕ್ಕೆ ಎಂದು ಕೇಳಬೇಕಾಗುತ್ತದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.