ಲಕ್ನೋ, ಉತ್ತರ ಪ್ರದೇಶ: ಯುಪಿಯ ರಾಜಧಾನಿ ಲಕ್ನೋದ ಹೋಟೆಲ್ ಒಂದರಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಂದು ವಿಡಿಯೋ ಮಾಡಿರುವ ಯುವಕ ಅವರನ್ನು ಕೊಲ್ಲುವ ಮೂಲಕ ಅವರ ಮಾನ ಉಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. 24 ವರ್ಷದ ಆರೋಪಿ ಅರ್ಷದ್ ತನ್ನ “ತಂಗಿಯರನ್ನು ಮಾರಾಟ ಮಾಡಬಾರದು” ಎಂಬ ಕಾರಣಕ್ಕಾಗಿ ಅವರ ಕೊಲೆ ಮಾಡಿದ್ದೇನೆ ಎಂದು ವೀಡಿಯೊದಲ್ಲಿ ಹೇಳಿದ್ದಾನೆ. ಆತನ ಪ್ರಕಾರ ಅವರ ಹುಟ್ಟೂರಾದ ಬುದ್ವಾನ್‌ನಲ್ಲಿ ಭೂ ಮಾಫಿಯಾ ಅವರ ಮನೆಯನ್ನು ವಶಪಡಿಸಿಕೊಂಡು ಅವರ ಸಹೋದರಿಯರನ್ನು ಕಳ್ಳಸಾಗಣೆ ಮಾಡಲು ಯೋಜಿಸಿತ್ತು ಎಂದು ಆರೋಪಿಸಿದ್ದಾನೆ.
ನನ್ನ ತಾಯಿ ಮತ್ತು ಮೂವರು ಸಹೋದರಿಯರು ಸತ್ತು ಹೋಗಿದ್ದಾರೆ. ನಾಲ್ಕನೆಯವಳು ಸಾಯುವ ಹಂತದಲ್ಲಿದ್ದಾಳೆ ಎಂದು ಮೃತ ದೇಹಗಳನ್ನು ತೋರಿಸುತ್ತ, ಮೊದಲು ಅವರ ಉಸಿರುಗಟ್ಟಿಸಿದೆ ನಂತರ ಅವರ ಮಣಿಕಟ್ಟುಗಳನ್ನು ಸೀಳಿದೆ. ಅದಕ್ಕೆ ನನ್ನ ತಂದೆ ಸಹಾಯ ಮಾಡಿದರು ಎಂದಿದ್ದಾನೆ. ಮೃತರನ್ನು ಅವನ ತಾಯಿ ಅಸ್ಮಾ ಮತ್ತು ಸಹೋದರಿಯರಾದ ಆಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ವಿಡಿಯೋ ಬಿಟ್ಟ ತಕ್ಷಣ ಹೋಟೆಲಿಗೆ ಧಾವಿಸಿದ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.