ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಅನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಇದೇ ದರ್ಗಾ ಕುರಿತು ಹಿಂದೂ ಸೇನೆ ವಿವಾದ ಮಾಡಿ ಅದು ಹಿಂದೂ ದೇವಾಲಯವನ್ನು ಕೆಡವಿ ಕಟ್ಟಲಾಗಿದೆ ಎಂದು ಕೋರ್ಟ್ ಮೊರೆಹೋಗಿದೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿರುವುದು ಗಮನಾರ್ಹವಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಹಿನ್ನೆಲೆಯಲ್ಲಿ ಮೋದಿ ಅಜ್ಮೀರ್ ದರ್ಗಕ್ಕೆ ಚಾದರ್ ಅರ್ಪಿಸುವ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಕಿರಣ್ ರಿಜಿಜು ಅವರ ಪೋಸ್ಟನ್ನು ಹಂಚಿಕೊಂಡಿರುವ ಪ್ರಧಾನಿ, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಕಾರ್ಯಕ್ರಮಕ್ಕೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ “ಪ್ರತಿಯೊಬ್ಬರ ಜೀವನದಲ್ಲಿ ಸುಖ ಮತ್ತು ಶಾಂತಿ ನೆಲೆಸಲಿ” ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಅಜ್ಮೀರ್ ದರ್ಗಾಗಳ ಉರೂಸ್ ಸಂದರ್ಭದಲ್ಲಿ ‘ಚಾದರ್’ ಅರ್ಪಿಸುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಕಳೆದ ವರ್ಷ, 812ನೇ ಉರೂಸ್ ಸಂದರ್ಭದಲ್ಲಿಯೂ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜಮಾಲ್ ಸಿದ್ದಿಕಿ ಅವರು ಪ್ರಧಾನಿಯ ಪರವಾಗಿ ಅಜ್ಮೀರ್ ದರ್ಗಾಕ್ಕೆ ಚಾದರ್ ಕಳುಹಿಸಿದ್ದರು.
ಇದೀಗ, 11ನೇ ಬಾರಿಗೆ ಪ್ರಧಾನಿಯವರು ಅಜ್ಮೀರ್ ದರ್ಗಾಕ್ಕೆ ಚಾದರ್ ಕಳುಹಿಸಿದ್ದಾರೆ. ಇತ್ತೀಚೆಗೆ, ಹಿಂದೂ ಸೇನಾ ಸಂಘಟನೆಯು ಅಜ್ಮೀರ್ ದರ್ಗಾದಲ್ಲಿ ಶಿವನ ದೇವಸ್ಥಾನವಿದೆ ಎಂದು ಆರೋಪಿಸಿ, ಅಜ್ಮೀರ್ ಜಿಲ್ಲಾ ನ್ಯಾಯಾಲಯದಲ್ಲಿ ದೂರು ನೀಡಿತ್ತು. ನ್ಯಾಯಾಲಯವು 2024ರ ನವೆಂಬರ್‌ನಲ್ಲಿ ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಒಪ್ಪಿಕೊಂಡಿತ್ತು.