ಉತ್ತರಾಖಂಡ: ಮುಸ್ಲಿಂ ಅಂಗಡಿ ವ್ಯಾಪಾರಿಗಳನ್ನು ಹೊರಹಾಕಲು ಸ್ಥಳೀಯರನ್ನು ಪ್ರಚೋದಿಸಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಳಿ ಸೇನಾ ಎಂಬ ಹಿಂದುತ್ವ ಗುಂಪಿನ ಕನಿಷ್ಠ ಐದು ಮಂದಿಯ ವಿರುದ್ಧ ಸ್ಥಳೀಯ ಪೋಲಿಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಳಿ ಸೇನಾ ಹೆಸರಿನ ಗುಂಪಿನವರ ವಿರುದ್ಧ ದಾಖಲಾಗಿರುವ ಪ್ರಕರಣದ ಪ್ರಕಾರ, ಫೆಬ್ರವರಿ 4ರಂದು ಸುಮಾರು 50-60 ಜನರ ಗುಂಪು ನಾಥುವಾಲಾ ಪ್ರದೇಶದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಸಭೆ ನಡೆಸಿತ್ತು. ಈ ಸಭೆಯಲ್ಲಿ ಮಾತನಾಡಿದವರು ಘಟನೆಗೆ ಕೋಮುಬಣ್ಣ ನೀಡಿ ಜನರನ್ನು ಪ್ರಚೋದಿಸಿದ್ದಾರೆ.
ಅವರು ಪ್ರಚೋದನಾಕಾರಿ ಭಾಷಣದಲ್ಲಿ, ಅಲ್ಲಿನ ಮುಸ್ಲಿಂ ಹಾಗೂ ಇತರೆ ಸಮುದಾಯದ ಬಾಡಿಗೆ ಅಂಗಡಿಯವರ ಮೇಲೆ ಹಲ್ಲೆ ನಡೆಸುವಂತೆ ಮತ್ತು ಅವರನ್ನು ಹೊರಹಾಕುವಂತೆ ಸ್ಥಳೀಯರನ್ನು ಪ್ರೇರೇಪಿಸಿದ್ದರು. ನಂತರ, ಜಾಥಾ ನಡೆಸಿದ ಪ್ರತಿಭಟನಾಕಾರರು ಮಾರ್ಗದಲ್ಲಿದ್ದ ಇತರೆ ಸಮುದಾಯದ ಅಂಗಡಿಗಳ ನಾಮಫಲಕಗಳು ಹಾಗೂ ಬ್ಯಾನರ್ಗಳನ್ನು ಧ್ವಂಸಗೊಳಿಸಿದ್ದರು.
ಫೆಬ್ರವರಿ 5ರಂದು, ಮತ್ತೆ ಸಭೆ ಸೇರಿದ್ದ ಕಾಳಿ ಸೇನಾ ಗುಂಪು ಡೋನಾಲಿ ಜಂಕ್ಷನ್‌ನಲ್ಲಿ ಮತ್ತೊಂದು ಸಾರ್ವಜನಿಕ ಸಭೆ ಆಯೋಜಿಸಿ ಮತ್ತೆ ಜನರನ್ನು ಪ್ರಚೋದಿಸಿತ್ತು. ಈ ಸಭೆಯಲ್ಲಿ, ಬಾಡಿಗೆದಾರರನ್ನು ಏಳು ದಿನಗಳಲ್ಲಿ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗಿತ್ತು. ಇಲ್ಲದಿದ್ದರೆ ಅವರು ಬಲವಂತವಾಗಿ ಅವರನ್ನು ಹೊರಹಾಕುತ್ತೇವೆ ಎಂಬ ಎಚ್ಚರಿಕೆ ನೀಡಲಾಗಿತ್ತು.
ಅದೇ ದಿನ, ಕಾಳಿ ಸೇನಾ ಗುಂಪಿನವರು ಲೋವರ್ ಟುನ್ವಾಲಾದ ವಾರದ ಸಂತೆಯಲ್ಲಿ ಬಲವಂತವಾಗಿ ಮುಸ್ಲಿಂ ವ್ಯಾಪಾರಿಗಳನ್ನು ತೆರವುಗೊಳಿಸಿ, ಮಾರುಕಟ್ಟೆಯನ್ನು ‘ಸನಾತನ’ ಎಂದು ಘೋಷಿಸಿದ್ದರು. ಇತರ ಸಮುದಾಯದ ವ್ಯಾಪಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಕಿಡಿಗೇಡಿಗಳು, ‘ಅಂಗಡಿಗಳನ್ನು ತೆರೆದರೆ ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಈ ಪ್ರಚೋದನಾತ್ಮಕ ಭಾಷಣಗಳಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಭೂಪೇಶ ಜೋಶಿ, ವೈಭವ ಪನ್ವಾರ್, ಅಜಯ್ ಕ್ಯಾಪ್ಟನ್, ಆಚಾರ್ಯ ವಿಪುಲ ಬಂಗ್ವಾಲ್, ನಿವೃತ್ತ ಯೋಧ ರಾಜೇಂದ್ರ ಸಿಂಗ್ ನೇಗಿ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.