ಉಡುಪಿ: ಸುಮಾರು 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ಮೂಲಕ, ಅವರು ಸಮಾಜದ ಮುಖ್ಯ ವಾಹಿನಿಗೆ ಮರಳಿದ ಮೊದಲ ಉಡುಪಿ ನಕ್ಸಲ್ ಹೋರಾಟಗಾರ್ತಿಯಾಗಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮಿಯೊಂದಿಗೆ ಅವರ ಸಹೋದರ ವಿಠಲ ಪೂಜಾರಿ, ಕುಟುಂಬದ ಸದಸ್ಯರು ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ ಉಪಸ್ಥಿತರಿದ್ದರು. ಶರಣಾಗತಿ ಪ್ರಕ್ರಿಯೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್ ಮತ್ತು ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಹಾಗೂ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸಹ ಹಾಜರಿದ್ದರು.
ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವಿಕ್ರಂ ಗೌಡ ಮತ್ತು ಲಕ್ಷ್ಮಿ ತೊಂಬಟ್ಟು ಅವರಲ್ಲಿ, ಇತ್ತೀಚಿನ ಪೊಲೀಸ್ ಎನ್ಕೌಂಟರ್‌ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದರು. ಇದೀಗ ಲಕ್ಷ್ಮಿ ಶರಣಾಗಿ, ಮುಖ್ಯ ವಾಹಿನಿಗೆ ಮರಳಿದ್ದಾರೆ.